ಭಾನುವಾರ, ಮೇ 17, 2015

ಪ್ರವಾಸಿ ನಾನೀಗ...ಹೀಗಿತ್ತು ಬದುಕು.
ಬೆಟ್ಟದಷ್ಟು ಕಷ್ಟವಿದ್ದರೂ
ನೆಮ್ಮದಿಗೆ ನಷ್ಟವಿರಲಿಲ್ಲ....
ಹಳಿ ಸೇರದ ಬದುಕು ನನ್ನದಾಗಿದ್ದರೂ
ಎಲ್ಲರೂ ನನಗಿದ್ದರು...
ಎಲ್ಲದಕೂ ಜೊತೆಯಾಗುತಾ...
ಆದರೆ ಇಂದು...
ಬದುಕ ಮುಂದಿರಿಸಿದ ಪ್ರಶ್ನೆಗಳಿಗೆಲ್ಲಾ
ಉತ್ತರಿಸಿತು ಕಾಲ...
ಎಲ್ಲವು ನೀಡಿದೆ ಬದುಕು
ಮನದ ನೆಮ್ಮದಿಯೊಂದ ಬಿಟ್ಟು
ಪ್ರವಾಸಿಯೆಂಬ ಹೆಸರನ್ನಿಟ್ಟು.....

ನಿದಿರೆಯಿಂದ ಎದ್ದೇಳಲು
ತಾಯಿಯ ಕರೆಗೆ ಕಾಯುವಂತಿಲ್ಲ
ಖಾಲಿ ಜೇಬಲಿ ಹೊರಟು ನಿಂತರೂ
ಕೈಚಾಚಿ ಪಡೆಯಲು
ತಂದೆಯ ಸಾನಿಧ್ಯವಿಲ್ಲ...
ಅಕ್ಕಂದಿರ ಸಲಹೆಗಳಿಲ್ಲ...
ತಂಗಿಯ ಪೆದ್ದು ಪ್ರಶ್ನೆಗಳಿಲ್ಲ...
ತಮ್ಮಂದಿರ ಜೊತೆಗಿನ ಜಗಳವಿಲ್ಲ
ಇಳಿ ಸಂಜೆಯ ಹೊತ್ತಿನಲಿ
ದಿನದ ಜೋಳಿಗೆಯ ಹಂಚಿ ತಿನ್ನುವ
ನೆಚ್ಚಿನ ಗೆಳೆಯರ ಬಳಗವಿಲ್ಲ...
ಹುಸಿಮುನಿಸು ತೋರಿದಾಗೆಲ್ಲಾ..
ನೀ ನನ್ನ ಜೀವ ಕಣೆ
ಮುದ್ದು ಬಂಗಾರವೆಂದು ರಮಿಸಲು
ಪ್ರಿಯ ಸಖಿಯು ಸನಿಹವಿಲ್ಲ....

ಸುತ್ತ ಮುತ್ತಲು ಮಂದಿಗೇನು ಕಮ್ಮಿಯಿಲ್ಲ
ಸಿಲುಕಿರುವೆ
ನಡುವೆ ನಾನು ಉಸಿರುಗಟ್ಟುವಂತೆ...  
ಮಾತುಗಳ ಬರವಾಗಿದೆ
ಎಲ್ಲರೂ ನಿರ್ಜೀವಿಗಳೇ
ಕಣ್ಮನ ಸೆಳೆಯುವ ಕಟ್ಟಡದಂತೆ
ನೋಡಲಷ್ಟೆ ಸುಂದರ..
ನನ್ನದೆನ್ನಲು ಯಾವುದಿಲ್ಲ...
ಜೊತೆಗೆ ಯಾರೂ ಇಲ್ಲ....

ತಂಪೆರೆಯುವ ಕೊಠಡಿಯಿದೆ
ಮನವ ತಂಪಾಗಿಸುವಲಿ
ಸೋತಿವೆ...
ಜೇಬುಗಳೇನೋ ತುಂಬಿ ನಿಂತಿವೆ
ಕಣ್ಣ ಬೇಡಿಕೆಯ ನಿದಿರೆಯ ಕೊಳ್ಳಲಾಗುತಿಲ್ಲ...

ಸಪ್ತಸಾಗರವ ದಾಟಿದರೂ
ದಡ ಕಾಣುತಿಲ್ಲ ಬದುಕು..
ಪ್ರವಾಸಿ ನಾನೀಗ....
ಎಲ್ಲವು ನನಗಿದೆ ಇಲ್ಲಿ
ಮನದ ನೆಮ್ಮದಿಯೊಂದ ಬಿಟ್ಟು
ಎಲ್ಲರಿರುವರು ಇಲ್ಲಿ
ನನ್ನವರೆನ್ನಲು ಇರುವವರ ಬಿಟ್ಟು...

 
ಎಡೆ ಬಿಡದೆ ಹಾಡಿದೆ ಹೃದಯವಿಂದು

"
ಘರ್ ಆಜಾ ಪರ್ ದೇಸೀ ತೇರಾ
ದೇಸ್ ಬುಲಾಯೋರೇ....!!!!

1 ಕಾಮೆಂಟ್‌:

 1. ಎಲ್ಲಾ ಇದ್ದು ಏನೂ ಇಲ್ಲವಾಗುವ, ಏನೂ ಇಲ್ಲದಿದ್ದಾಗ ಎಲ್ಲಾ ಇದ್ದ ನಿಮ್ಮ ಕವನ ಚೆನ್ನಾಗಿತ್ತು. ಓದಿ ಮುಗಿಸಿದಾಗ ಮನದಾಳದಿಂದ ಒಂದು ವಿಷಾದದ ನಿಟ್ಟುಸಿರು ಹೊರಬಂತು. ಬಳಸಿದ ಪದಗಳು ಸಮಯೋಚಿತವಾಗಿತ್ತು, ಆ ಮಾತು ಬೇರೆ ಯಾಕೆಂದರೆ ಭಾವದ ಮುಂದೆ ಭಾಷೆಯೂ ಗೌಣವಾಗುತ್ತದೆ.

  ಬರಹವೊಂದು ಓದುಗರ ಅಂತರಾಳಕ್ಕಿಳಿದು 'ಅರೆ ಈ ಭಾವ ನನ್ನನ್ನೂ ಕಾಡಿದೆ ಅಲ್ವಾ' ಅನ್ನುವ ಅನಿಸಿಕೆ ಹುಟ್ಟಿಸುತ್ತದಲ್ವಾ ಆಗ ಬರಹಗಾರ ಗೆದ್ದಂತೆ. ಸಿದ್ಧಾಂತ, ತಳಹದಿ, ಆದರ್ಶ ಯಾವುದೇ ಆಗಿದ್ದರೂ ಬರಹವೊಂದರ ಅಂತಿಮ ಸಾಫಲ್ಯವಿರುವುದು ಅದು ಓದುಗರನ್ನು ಹೇಗೆ ಮತ್ತು ಎಷ್ಟು ತೀವ್ರವಾಗಿ ತಟ್ಟಿದೆ ಅನ್ನುವುದರಲ್ಲಿ. ಹಾಗೆ ನೋಡಿದರೆ ನಿಮ್ಮ ಕವನದ ಪ್ರತಿಯೊಂದು ಸಾಲುಗಳೂ ಗಾಢವಾಗಿ ಭಾವಗಳ ಜೊತೆ ಸರಸವಾಡುತ್ತವೆ. ಪ್ರತಿಯೊಂದು ಪದಗಳೂ 'ಎಷ್ಟು ನಿಜ ಅಲ್ವಾ' ಅಂತನ್ನಿಸುವಂತೆ ಮಾಡುತ್ತದೆ. ಕವನ ಕಟ್ಟುವ ಬಿಮ್ಮ ಸಾಮರ್ಥ್ಯಕ್ಕೆ ನನ್ನ ಕಡೆಯಿಂದ a big salute.

  ಅಮ್ಮನ ಕರೆ, ಅಕ್ಕನ ಸಲಹೆ, ತಂಗಿಯ ಪ್ರಶ್ನೆ, ತಮ್ಮನ ಜಗಳ, ಗೆಳೆಯರ ಬಳಗ, ಸಖಿಯ ಹುಸಿ ಮುನಿಸು, ಅಪ್ಪನ ಸಾನ್ನಿಧ್ಯ ಇವೆಲ್ಲಾ ಬದುಕಲ್ಲಿ ಖುಶಿಗಳನ್ಬು ಸಣ್ಣ ಸಣ್ಣ ಪೊಟ್ಟಣಗಳಾಗಿ ಕಟ್ಟಿಕೊಡುವ ಅದ್ಭುತ ಕ್ಷಣಗಳು. ಆ ಕ್ಷಣಕ್ಕೆ ಅವ್ಯಾವುವೂ ಅದ್ಭುತ ಅನ್ನಿಸುವುದೇ ಇಲ್ಲ, ಆದ್ರೆ ಬದುಕು ಒಂದಿನ ಅವೆಲ್ಲವನ್ನೂ ನಮ್ಮುಂದೆ ರಾಶಿ ಹಾಕಿ, ತಿವಿದು "ಒಮ್ಮೆ ಈ ರಾಶಿಯತ್ತ ದೃಷ್ಟಿ ಹಾಯಿಸು, ಅದೆಂಥಾ ಮಧುರ ಕ್ಷಣಗಳು ನಿನ್ನ ನೆನಪಿನ ಜೋಳಿಗೆಯಲ್ಲಿವೆ" ಎಂದು ಹೇಳುತ್ತದೆ. ಅಂತಹಾ ಕ್ಷಣಗಳು ಜೊತೆಗಿದ್ದಾಗ ಅವೆಲ್ಲವ ಬಿಟ್ಟು ನುಣ್ಣಗಿರೋ ದೂರದ ಬೆಟ್ಟದ ಕಡೆ ನಡೆದ ನಮ್ಮ ಮಹತ್ವಾಕಾಂಕ್ಷೆ ಮತ್ತು ಬೆಟ್ಟದ ಮೇಲೆ ಹತ್ತಿ ನಿಂತು ಕೈ ತುಂಬಿದಾಗ ಆ ಕ್ಷಣಗಳು ಜೊತೆಗಿಲ್ಲದೆ ಬರಿ ನೆನಪುಗಳಾಗಿ ಜೊತೆ ನೀಡುವ ಬದುಕಿನ ವೈಚಿತ್ರ್ಯದ ಚಿತ್ರಣವನ್ನು ಮತ್ತು ಅದು ಎಬ್ಬಿಸುವ ದಟ್ಟ ವಿಷಾದವನ್ನು ತುಂಬಾ ಪರಿಣಾಮಕಾರಿಯಾಗಿ ಚಿತ್ರಿಸಿದ್ದೀರಿ.

  ಕೊನೆಯದಾಗಿ,
  ಒಬ್ಬ ಅಣ್ಣನ ಮುದ್ದಿನ ಮತ್ತು ಹೆಮ್ಮೆಯ ತಂಗಿಯಾಗಿ ನನಗನ್ನಿಸುವುದಷ್ಟೇ... ಪ್ರಪಂಚದ ಎಲ್ಲಾ ಅಣ್ಣಂದಿರಿಗೂ ತಂಗಿ ಎಷ್ಟೇ ಬುದ್ಧಿವಂತೆಯಾಗಿದ್ದರೂ ಆಕೆ ಕೇಳುವ ಪ್ರಶ್ನೆಗಳು 'ಪೆದ್ದು' ಎಂದೇ ಅನಿಸುತ್ತದೆ. ಅವಳು ಏನೇ ಮಾಡಿದರೂ ಅವೆಲ್ಲಾ 'ಗೊತ್ತಿಲ್ಲದೆ' ಮಾಡಿದ್ದೆಂದೇ ಅನಿಸುತ್ತದೆ. ತನ್ನ ತಂಗಿ ಇನ್ನೂ ಅಂಬೆಗಾಲಿಡುವ ಮಗು, ಹಾಗಾಗಿ ಅವಳ ಪ್ರತಿಯೊಂದು ಹೆಜ್ಜೆಯಲ್ಲೂ ನಾ ಆಸರೆಯಾಗಿ , ಶಕ್ತಿಯಾಗಿ, ಆತ್ಮಸ್ಥೈರ್ಯವಾಗಿ ಜೊತೆಗಿರಬೇಕು ಅನ್ನಿಸುತ್ತದೆ. ಅದಕ್ಕೆ ಎಲ್ಲಾ ಅಣ್ಣಂದಿರಿಗೂ ತಂಗಿಯ ಪ್ರಶ್ನೆಗಳೆಲ್ಲವೂ ಮುಗ್ಧತೆಯ ಪ್ರತೀಕವಾಗಿಯೇ ಕಾಣುತ್ತದೆ. ಅದಕ್ಕೇ ತಂಗಿಯ ಸಣ್ಣದೊಂದು ತುಸುವಾಗಿ ಕೊಂಕಿದರೂ ಅಣ್ಣಂದಿರು ವ್ಯಗ್ರವಾಗುತ್ತಾರೆ, ಮುಂದಿನ ಪರಿಣಾಮಗಳೊಂದನ್ನೂ ವಿವೇಚಿಸದೆ ಆ ಕ್ಷಣಕ್ಕೆ ಏನನ್ನಿಸುತ್ತದೋ ಅದನ್ನಷ್ಟೇ ಕಾರ್ಯರೂಪಕ್ಕೆ ತರುತ್ತಾರೆ. ಅದು ಕೋಪ, ಆಕ್ರೋಶ ಅಲ್ಲ. ತಂಗಿಯ ಮೇಲಿರುವ ಅಗಣಿತ ಕಾಳಜಿಯ ಒಂದು ರೂಪವಷ್ಟೆ.

  ಬಹುಶಃ ಪ್ರಪಂಚದ ಯಾವ ಭಾಷೆಯ ಯಾವ ಪದಗಳೂ, ಯಾವ ಅಕ್ಷರಗಳೂ ಅಣ್ಣ-ತಂಗಿಯ ಸಂಬಂಧದ ಬಿಗಿತವನ್ನು, ಅನೂಹ್ಯತೆಯನ್ನು ಕಟ್ಟಿಕೊಡಲಾರವು. ಯಾಕೆಂದರೆ ಆ ಬಂಧವೆಂಬುವುದು ಒಂದು ನಿಸ್ವಾರ್ಥತೆ, ಒಂದು ಅಪರಿಮಿತ ಕಾಳಜಿ, ಒಂದು ಅಮಿತ ಪ್ರೀತಿ, ಅನುಭವಕ್ಕಷ್ಟೆ ದಕ್ಕುವ ಒಂದು ಅದ್ಭುತ, ಅಮೂರ್ತ ಭಾವವದು. ಅಂತದ್ದೊಂದು ಭಾವಕ್ಕೆ ತಮ್ಮದೇ ಆದ ವಿಶಿಷ್ಟ ಭಾಷ್ಯ ಬರೆದ ಪ್ರಪಂಚದ ಪ್ರತಿಯೊಬ್ಬ ಅಣ್ಣಂದಿರಿಗೂ ಶಿರಬಾಗಿ ನಮಿಸುವೆ...

  ಪ್ರತ್ಯುತ್ತರಅಳಿಸಿ