ಭಾನುವಾರ, ಮೇ 31, 2015

ನೆನಪಿನಂಗಳದಿಂದ...

ಅದೊಮ್ಮೆ ಸರಿ ತಪ್ಪಿನ ನಡುವಿನ ವ್ಯತ್ಯಾಸವೇ
ತಿಳಿದಿರದ ಸಮಯ... ಚಿಕ್ಕದೊಂದು ತಪ್ಪು ಮಾಡಿದ್ದೆ
(ಕ್ಷಮಿಸಿ, ನನ್ನ ದೃಷ್ಟಿಯಲ್ಲಿ ಅಲ್ಲ)
ಅಪ್ಪ ಹೊಡೆದಿದ್ದ...
ಮೊದಲ ಬಾರಿ ಅಪ್ಪ "ಕ್ರೂರಿ"ಯಂತೆ ಕಂಡ


ಶಾಲಾ ಜೀವನವೇ ಮುಳ್ಳಿನಂತ ಬದುಕೆಂದು
ನನಗೇ ನಾನೇ ತೀರ್ಮಾನಿಸಿ ಬಿಟ್ಟ ಕಾಲ...
ಇನ್ನೇನಿದೆ..? ಪಲಾಯನವಾದಿಯಾಗಿದ್ದೆ
ಅಪ್ಪ ಹೊಡೆದಿದ್ದ...
ಮೊದಲ ಬಾರಿ ಅಪ್ಪ "ಒರಟ"ನಂತೆ ಕಂಡ.

ಅದೊಮ್ಮೆ ಭಾಷಣ ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ
ಪಡೆದ ನೆನಪು... ಎಲ್ಲರ ಹೊಗಳಿಕೆಯಿಂದಲೂ
ಉಬ್ಬಿ ಹೋಗಿದ್ದೆ ನಾನು...
ಅಪ್ಪನ ಮುಖದಲ್ಲಿ ಯಾವುದೇ ಖುಶಿ ಇರಲಿಲ್ಲ
(ಕ್ಷಮಿಸಿ, ನಾ ಕಾಣಲಿಲ್ಲ)
ಮೊದಲ ಬಾರಿ ಅಪ್ಪ "ಸಿಡುಕ"ನಂತೆ ಕಂಡ

ಕೊನೆಗೂ... ಪುಸ್ತಕಗಳ ನಡುವಿನ ಬದುಕಿಗೆ
ತಿಲಾಂಜಲಿ ಇಟ್ಟಿದ್ದೆ... ನನ್ನವರು ಅಂದವರೆಲ್ಲಾ
ಯಾಕೆಂದು ಪ್ರಶ್ನಿಸುವವರೇ...
ಅಪ್ಪ... ಒಂದು ಮಾತು ಹೇಳಲೂ ಇಲ್ಲ
ಕೇಳಲೂ ಇಲ್ಲ...
ಮೊದಲ ಬಾರಿ ಅಪ್ಪ "ವಿಚಿತ್ರ"ವಾಗಿ ಕಂಡ

ಅಂತೂ ಬದುಕು ಒಂದು ಹಂತ ತಲುಪಿದೆ...
ಎಲ್ಲಕಿಂತ ಹೆಚ್ಚಾಗಿ..."ನನ್ನ ಬದುಕ ನಾ ರೂಪಿಸಬಲ್ಲೆ"
ಅನ್ನುವ ಚಿಕ್ಕದೊಂದು ಆತ್ಮವಿಶ್ವಾಸ ಬೆಳೆದಿದೆ
(ಇಲ್ಲ, ಅಪ್ಪ ಬೆಳೆಸಿದ್ದ ನನಗರಿವಿಲ್ಲದೆ)
ಈಗೆಲ್ಲಾ... ಕ್ರೌರ್ಯವಿಲ್ಲದ, ಒರಟುತನವಿಲ್ಲದ
ಸಿಡುಕಿಲ್ಲದ, ವಿಚಿತ್ರವಾಗಿರದ ಅಪ್ಪನನ್ನು ಕಾಣುತ್ತಿರುವೆ
ಕೆಲವೊಮ್ಮೆ ಆತನ ಮಾತುಗಳಿಗೆ ನಾ ಜೊತೆಗಾರನೇ...
ಮೊದಲ ಬಾರಿ ಅಪ್ಪ "ಗೆಳೆಯ"ನಂತೆ ಕಂಡ

ಕಾರಣವಿಷ್ಟೇ...
ತಾಯಿಯ ಸಹನೆಯಲ್ಲಿರೋ ಪ್ರೀತಿಯನ್ನು
ಕಂಡಿದ್ದೆನೇ ಹೊರತು...
ತಂದೆಯ ಸಿಟ್ಟಿನಲ್ಲಿರೋ
ಕಾಳಜಿಯನ್ನಲ್ಲ...

ಶನಿವಾರ, ಮೇ 23, 2015

ಕೆಲವು ಹನಿಗಳು...


ಆಗಷ್ಟೇ ಪ್ರೀತಿಯಲ್ಲಿ ಸೋಲು ಕಂಡಿದ್ದ
ಗೆಳೆಯನೊಬ್ಬನಲ್ಲಿ ಕೇಳಿದೆ...
ಅವಳಿಂದ ನೀ ದೂರವಾದಿಯೋ...?
ಇಲ್ಲ ನಿನ್ನಿಂದ ಅವಳೋ...?
ಕಣ್ಣಂಚು ಒದ್ದೆ ಮಾಡುತ್ತಲೇ ಗೆಳೆಯನೆಂದ...

ಇಲ್ಲ ಪ್ರೀತಿ ನಮ್ಮಿಂದ ದೂರವಾಗಿದೆ!!!!
-----------------------------------------------------------------------------------------------------------------------------------


ಎರಡಕ್ಷರ ಬರೆಯದಿರಿವಷ್ಟು
ನಿರಕ್ಷರಿಯಾಗಿದ್ದೆ...
ಅವಳ ಪ್ರೀತಿಯು ಇಂದು
ನನ್ನ ಕವಿಯಾಗಿಸಿದೆ...


------------------------------------------------------------------------------------------------------------------------------------

ಹೆಸರು ಹೇಳದಿರು ಗಾಳಿಯೇ...
ಸುಮ್ಮನೆ ನೆನಪಿಸಿ ಬಿಡು ನನ್ನವಳಿಗೆ...
ಯಾರನ್ನು ನೀನು ಮರೆತಿರುವೆಯೋ...
ಅವನು ನಿನ್ನದೇ ನೆನಪಲಿ ಕುಳಿತಿರುವನೆಂದು..!

------------------------------------------------------------------------------------------------------------------------------------

ದೂರವಾಗುತ್ತಾ ಅವಳೆಂದಳು...
ನಿನ್ನಂತವರು ಸಾವಿರ ಜನ ಸಿಗುವರೆಂದು
ಮುಗಳ್ನಗೆಯೊಂದಿಗೆ ನಾ ಕೇಳಿದೆ
ಇನ್ನೂ ನನ್ನಂತವನ ಹುಡುಕಾಟವೇಕೆಂದು...


ಬುಧವಾರ, ಮೇ 20, 2015

ಇದೊಂದು ಬಿನ್ನಹ ಕೇಳು ಮನವೇ

ಸುಮ್ಮನಿರು ಮನವೇ...
ಇಲ್ಲದ ಉಸಾಬರಿ ನಿನಗೇಕೆ..?
ಕ್ಷಣ ಮಾತ್ರಕೂ ನಿನ್ನ ನೆನೆಯದವರ
ಹೀಗೇಕೆ ನೆನೆಯುವೆ ನೀನು
ಮಂಕಾಗದಿರು ಮನವೇ..!

ಸಾಗಲಿರುವ ದಾರಿ ತುಂಬಾ ದೂರವಿದೆ
ಗತಿಸಿದ ನೋವಿಗೆ ಈ ಚೀತ್ಕಾರವೇಕೆ..?
ಬಯಸಿರುವೆಯಾದರೂ ಯಾರನ್ನು..
ಯಾರ ಬಯಕೆಯಲೂ ನಿನ್ನ ಪಾಲಿಲ್ಲದಿರುವಾಗ

ನೀನೇನೋ ಜಡಗಟ್ಟಿ ಕುಳಿತಿರುವೆ
ಕಣ್ಣಿಗೇಕೆ ಈ ಪರಿ ಶಿಕ್ಷೆ..?
ನೆನಪಿಸಿ ಸುಮ್ಮನಾಗುವೆ ನೀನು
ಕಂಬನಿ ತಡೆಯಲು ಕೈಗಳು ಸೋತಿವೆ..
ಹೆಜ್ಜೆಗಳು ಎಡವುತಿವೆ..
ಮುಂದೆ ಸಾಗದಂತೆ,,!

ಇದೊಂದು ಬಿನ್ನಹ ಕೇಳು ಮನವೇ
ಇನ್ನಾದರೂ ಮರೆತುಬಿಡು...
ಕಳೆದು ಹೋದ ನಿನ್ನೆಗಳ...
ಮುಂದಿರುವ ನಾಳೆಗಳಿಗಾದರೂ

ಮಂಗಳವಾರ, ಮೇ 19, 2015

ಸೋತ ಶರತ್ತು

ನೆನಪಿದೆಯಾ ಹುಡುಗಿ ಆ ದಿನ...
ಶರತ್ತೊಂದನ್ನು ಇಟ್ಟಿದ್ದೆ ನೀನು...
ಕಣ್ಣಲ್ಲಿ ಕಣ್ಣಿಟ್ಟು ನೋಡೋಣವೇ
ಅಂತ ಕೇಳಿದ ನೆನಪು...
ನಾ ಗೆಲ್ಲುವವನಿದ್ದೆ ಹುಡುಗೀ ನಿನ್ನ ಶರತ್ತು
ಆದರೆ...
ಒಂದು ಕ್ಷಣಕ್ಕೆ ನಾ ಕಣ್ಣು ಮುಚ್ಚಿದೆ..
ಯಾಕೆ ಗೊತ್ತಾ
ನಿನ್ನ ಕಣ್ಣ ಹನಿಗಳು ಜಾರುವುದರಲ್ಲಿತ್ತು ಸಖೀ
ಕಡೆಗೂ ನಿನ್ನ ಗೆಲ್ಲಲಾಗಲಿಲ್ಲ
ಹೌದು ನಾ ಸೋತಿದ್ದೆ
ನಿನ್ನ ಗೆಲ್ಲಿಸಲೆಂದು...

ಭಾನುವಾರ, ಮೇ 17, 2015

ನ್ಯಾನೋ ಕಥೆಗಳು

1. ಕಡಿಯಿರಿ, ಕೊಲ್ಲಿರಿ, ಎಂದೆಲ್ಲಾ ಉತ್ತೇಜಿಸಿದ ನಾಯಕನ ಮಾತು ಪಾಲಿಸಲು ಧರ್ಮ ರ(ಭ)ಕ್ಷಕ ಹೊರಟ. ಬೇಟೆಗಾರನ ಕೋವಿಗೆ ಸಿಕ್ಕ ಪಕ್ಷಿಯಂತೆ ಕೆಲ ಜೀವಗಳು ಧರೆಗುರಿಳಿದವು. ರಕ್ಷಕ ಸೆರೆಮನೆ ಸೇರಿದ. ನಾಯಕ ಮತ್ತೊಂದು ವೇದಿಕೆ ಹತ್ತಿದ ಮತ್ತದೇ ರಾಗ ಹಾಡಲು.


2. ನೀರ ಮೇಲಿನ ಗುಳ್ಳೆಯಂತಿರೋ ಬದುಕಿನಲಿ ಮನುಷ್ಯ ಯಾವುದಕ್ಕೂ ಆಸೆ ಪಡಬಾರದು ಅಂತೆಲ್ಲಾ ಬೋಧಿಸಿದ ಬೋಧಕನ ಚಿಂತೆಯೆಲ್ಲವೂ ತನ್ನ ಮನೆಯ ಎರಡನೆಯ ಮಹಡಿಯನ್ನು ಪೂರ್ಣಗೊಳಿಸುವುದರತ್ತಲೇ ನೆಟ್ಟಿತ್ತು.


3. ಕಟ್ಟಿಕೊಂಡವಳ ಮಾತು ಕೇಳಿ ಹೆತ್ತವಳನ್ನೇ ವೃದ್ಧಾಶ್ರಮಕ್ಕೆ ಸೇರಿಸಲು ಹೊರಟ ಮಗ. ಅವನ ಕಾರಿನ ಹಿಂದಿನ "ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರೆಯದಿರು" ಎಂಬ ಬರಹ ಯಾಕೋ ವ್ಯಂಗ್ಯವಾಗಿ ನಗುತ್ತಿತ್ತು. 

ನನ್ನಯ ಮನವಿ

ಓ... ಕಣ್ಣುಗಳೇ...
ಇನ್ನೂ ಹುಡುಕಾಟವೇನು..?
ಬರಲಾರಳು ಇನ್ನು;
ಕೈ ತಪ್ಪಿ ಹೋದ ಕನಸೊಂದಿದೆ ಎನಗೆ
ಅದನಾದರೂ ಹುಡುಕಿಕೊಡಿ...!

ಓ... ಕೈಗಳೇ ಕೇಳಿರಿ  ನೀವು
ಚಾಚುವಿರೇನು ಇನ್ನೂ..?
ಸಿಗಲಾರಳು ನಿಮಗೆ;
ಚೆಲ್ಲಾಪಿಲ್ಲಿಯಾದ ಬದುಕೊಂದಿದೆ ಎನಗೆ
ಅದನಾದರೂ ಹೆಕ್ಕಿ ಕೊಡಿ..!

ಓ... ಕಾಲುಗಳೇ ನಿಮಗೂ
ಧಾವಂತವೇನೋ ಅವಳ ಸೇರಲು..?
ತಲುಪಲಾಗದು ಅವಳ:
ನಾ ಕಳೆದುಕೊಂಡ ನೆಮ್ಮದಿಯೊಂದಿದೆ
ಸೇರಬೇಕು ಅದರ ಕಡೆ...!

ಓ ಹೃದಯವೇ ಜೋರಾಗಿ ಬಡಿಯುತಿರು
ಕಿವಿಗಳೂ ಕೇಳುವಂತೆ...
ತಿಳಿಯಲಿ ಅವಳು
ನಾನಿನ್ನೊ ಬದುಕಿರುವೆನೆಂದು

ಓ... ನಿದಿರೆಯೇ...
ಇವರಾರೂ ಕೇಳರು ನನ್ನಯ ಮನವಿಗಳ
ನೀನಾದರೂ ಬಂದು ಬಿಡು...
ಬಳಲಿ ಹೋಗಿರುವೆ
ವಿಶ್ರಾಂತಿ ಬೇಕೆನಗೆ..!!!!

ಕವಿತೆ ಜನ್ಮ ತಾಳುತ್ತಿದೆ...

ನೋವ ಪ್ರದರ್ಶನಕ್ಕಿಟ್ಟಿರುವೆ...

ಅರ್ಥ ಮಾಡಿಕೊಂಡವರೆಷ್ಟೋ..?
ಅಸಹನೆ ವ್ಯಕ್ತಪಡಿಸಿದವರೆಷ್ಟೋ..?
ಬಾಚಿಕೊಂಡವರೆಷ್ಟೋ..?
ಬಿಸುಟಿ ಹೋದವರೆಷ್ಟೋ...?

ನಿರ್ಜೀವ ಭಾವನೆಗಳ ನಡುವೆ
ಕವಿತೆ ಜನ್ಮ ತಾಳುತ್ತಿದೆ
ನಿನ್ನ ನೆನಪೆಂಬ ನೆಪವನ್ನಿಟ್ಟು!!!